ಬೈಗುಳ ಬರಹಗಳು  ಪುಸ್ತಕ ಪರಿಚಯ

ಬೈಗುಳ ಬರಹಗಳು  ಪುಸ್ತಕ ಪರಿಚಯ

ಬೈಗುಳ ಬರಹಗಳು  ಪುಸ್ತಕ ಪರಿಚಯ

ಬರಹದಲಿ ಮೂಡಿಹುದು ಭಾವನೆಯ ಗಮನಿಸಿರಿ 
ಸರಸವದು ಮಾತುಗಳ ಜಟಪಟಿಗಳ
ಕರವದುವೆ ಮುಗಿಯುತಲಿ ಬೇಡುವೆನು ತಿಳಿಯಿರದು
ಧರೆಯಲ್ಲಿ ಇರುವುದದು ಲಕ್ಷ್ಮಿ ದೇವಿ...

ಬದುಕು ಅಂದಮೇಲೆ  ಪ್ರತಿಯೊಂದು ವಿಷಯವೂ ಪ್ರಾಮುಖ್ಯತೆಯನ್ನು ಪಡೆದಿದೆ. ಕೆಲವರಿಗೆ ಅವು ಇಷ್ಟವಾಗುವ ರೀತಿಯಲ್ಲಿದ್ದರೆ, ಕೆಲವರಿಗೆ ಇಷ್ಟವಾಗದ ರೀತಿಯಲ್ಲಿರುತ್ತದೆ. ಜನರ ನಡೆ -ನುಡಿ ಕೂಡ ಅದರಲ್ಲಿ ಒಂದಾಗಿದೆ. ಬರಹದಲ್ಲಿ  ಹಲವಾರು ರೀತಿಯ ಭಾವನೆಗಳನ್ನು  ನಾವು ಮೂಡಿಸಬಹುದು, ಅದಕ್ಕಾಗಿ  ಗಮನಿಸಿರಿ . ಮಾತುಗಳಲ್ಲಿ ಸರಸದ ಮಾತುಗಳು ಇರುತ್ತದೆ, ಕೆಲವೊಮ್ಮೆ ಸಿಡುಕು ಇರುತ್ತದೆ ಕೆಲವೊಮ್ಮೆ ಪ್ರೀತಿಯ ಮಾತುಗಳು ಇರುತ್ತದೆ  ಕೈಮುಗಿದು ಬೇಡುತಲೆ ಹೇಳುತ್ತಿದ್ದೇನೆ, ಎಲ್ಲವನ್ನು ಅರ್ಥ ಮಾಡಿಕೊಂಡು ನಡೆಯಿರಿ ಎಂದು. ಭೂಮಿಯ ಮೇಲೆ ಹಲವಾರು ರೀತಿಯ ಗುಣದವರು ಇದ್ದಾರೆ. ಅದನ್ನೆಲ್ಲ ಸಹಿಸಿಕೊಂಡು  ಜೀವನ ಮಾಡಬೇಕು ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ 
 ಸಾಮಾನ್ಯವಾಗಿ ದಿನನಿತ್ಯ ನಾವು ವಿಭಿನ್ನ ರೀತಿಯ ಗುಣ ಇರುವಂತಹ ವ್ಯಕ್ತಿಗಳನ್ನು ಕಾಣುತ್ತೇವೆ. ಹಾಗೆ ವಿಭಿನ್ನ ರೀತಿಯ  ಧರ್ಮದವರನ್ನು ನೋಡುತ್ತೇವೆ. ವಿವಿಧ ಆಚರಣೆ ಮಾಡುವಂತಹ  ಪಂಗಡಗಳು ಇವೆ. ಅವರ ಹಾವ ಭಾವ, ನಡೆ ನುಡಿ, ಎಲ್ಲವೂ ಭಿನ್ನವಾಗಿ ಇದೆ. ಭಾಷೆಯಲ್ಲೂ ಬದಲಾವಣೆ ಇರುತ್ತದೆ. ಆದರೆ ಭಾವ ಒಂದೇ ರೀತಿ. ವ್ಯಕ್ತಿಯಿಂದ ವ್ಯಕ್ತಿಗೆ ಭಾವನೆ ಬೇರೆಯಾಗಿರಬಹುದು ಆದರೆ ಭಾವ ಎಂಬುದು ಒಂದೇ. ಇಂತಹ ಒಂದು ಪ್ರಯತ್ನದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಬೈಗುಳ ಸಾಹಿತ್ಯ ತರುವ ಪ್ರಯತ್ನ ಮಾಡಿರುವವರು ಅಲ್ಲಾರಂಡ ವಿಠಲ್ ನಂಜಪ್ಪನವರು. ಇವರು ಒಂದು ವಿಭಿನ್ನ ರೀತಿಯ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಹೆಸರು ಕೇಳಿದರೆ  ಪ್ರಯತ್ನ ಕಷ್ಟಪರ ಎಂದು ತಿಳಿಯುತ್ತದೆ . " ಬೈಗುಳ ಬರಹಗಳು "
 ಈ ಪುಸ್ತಕದಲ್ಲಿ ವಿಭಿನ್ನ ರೀತಿಯ ಸಾಹಿತ್ಯ ಹೊರತರುವ ಪ್ರಯತ್ನವನ್ನು ಮಾಡಿದ್ದಾರೆ. ಬೈಗುಳಗಳನ್ನು ಕೇಳಲು ಇಷ್ಟಪಡದ ಜನರ ಮಧ್ಯೆ  ಬೈಗುಳ ಬರಹ ಪುಸ್ತಕವು  ತನ್ನದೇ ಆದ ವಿಭಿನ್ನ ರೂಪವನ್ನು ಹೊರತಂದಿದ್ದು,  ಇದರಲ್ಲಿ ಬೈಗುಳಗಳು ಹೇಗೆ ಬರುತ್ತವೆ..., ಇಷ್ಟವಿದ್ದು ಬರುತ್ತದೆಯೋ? ಇಷ್ಟ ಇಲ್ಲದೇ ಬರುತ್ತದೆಯೋ? ಅಥವಾ ದಿನನಿತ್ಯದ ರೂಢಿಯಿಂದ ಬರುತ್ತದೆಯೋ? ಎಂಬುದನ್ನು ವಿಶೇಷ ವಿಮರ್ಶೆಗಳಿಂದಲೇ ತಿಳಿಸಿದ್ದಾರೆ. ಪುಸ್ತಕದ ಮುಖಪುಟದ ನಂತರದಲ್ಲಿ ಶ್ರಮಿಕನ ನುಡಿ ಅಲ್ಲಾರಂಡ ವಿಠಲ್ ನಂಜಪ್ಪ ರವರ ನುಡಿಯೇ  ವಿಶೇಷವಾಗಿ ಕಾಣಸಿಗುತ್ತದೆ. ಆನಂತರದಲ್ಲಿ ಬೆನ್ನುಡಿಯಲ್ಲಿ ಡಾ.ಜೆ. ಸೋಮಣ್ಣನವರು ಕೂಡ
 ಅಲ್ಲಾರಂಡ ರಂಗಚಾವಡಿವತಿಯಿಂದ ಪ್ರಕಟಿಸಿರುವ "ಬೈಗುಳ ಬರಹಗಳು" ಎಂಬ ಹೊತ್ತಿಗೆ ವಿವಿಧ ಸಾಹಿತಿಗಳ ಬರಹಗಳಿಂದ ವಿವಿಧತೆಯಿಂದ ಕೂಡಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಬೈಗುಳದಲ್ಲಿ ಪಿ ಹೆಚ್. ಡಿ ಮಾಡಿರುವ ಡಾ. ಸಿ. ಪಿ. ನಾಗರಾಜುರವರು ತಮ್ಮದೇ ಆದಂತಹ ನಿಲುವು  ಒಳಗೊಂಡಂತೆ ವಿವಿಧ ರೀತಿಯ ವಿಷಯಗಳನ್ನು, ವಿಮರ್ಶೆಗಳನ್ನು   ಬೈಗುಳ ಬರಹದ ಆದಿಯಲ್ಲಿಯೆ ತಿಳಿಸಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ನಿಜವಾಗಿಯೂ ಹೇಳಬೇಕೆಂದರೆ ಬೇಕೆಂದು ಬೈಗುಳಗಳನ್ನು ಯಾರು ಆಡುವುದಿಲ್ಲ. ಕೆಲವರು ಮಾತನಾಡುವ ಶೈಲಿಯೇ ಬೈಗುಳಗಳಲ್ಲಿರುತ್ತದೆ. ಕೆಲವರು ಬೇಕೆಂದೇ ಸಿಟ್ಟಿನಿಂದ ಬೈಗುಳುಗಳನ್ನ ಹರಿ ಬಿಡುತ್ತಾರೆ. ಕೆಲವರು ಪ್ರೀತಿಯಿಂದಲೂ ಬಯ್ಯುತ್ತಾರೆ. ಯಾವುದನ್ನು ಪರಿಗಣಿಸುವುದು?  ಮನಸ್ಸಿನ ಭಾವನೆಗಳು ಹೊರಹೊಮ್ಮುವುದೇ ಬೈಗುಳಗಳಿಂದ, ಬೈಗುಳ  ಪ್ರೀತಿಯಿಂದಲೂ ಹೊರಹೊಮ್ಮುತ್ತದೆ. 
ಈ ಪುಸ್ತಕದಲ್ಲಿ ನಾವು ನೋಡುವುದು ದೇವರನ್ನು ಕೂಡ  ಬಯ್ಯುವ ಹಾಡು, ಹಬ್ಬ!.. ಕೊಡಗು ಜಿಲ್ಲೆ ಎಂದರೆ ತನ್ನ ಪ್ರಕೃತಿ ಸೌಂದರ್ಯದಿಂದ  ರಮಣೀಯವಾಗಿದೆ ಎಂಬುದನ್ನು ತಿಳಿಸುತ್ತಾ, ಅಲ್ಲಿನ ಆಚಾರ ವಿಚಾರಗಳಲ್ಲಿ ಪ್ರಮುಖವಾಗಿ ಕಾಣುವ ಬಾಳೋಪಾಟ್ ಬಗ್ಗೆ ಮತ್ತು  ಕೊಡಗಿನ ಬಗ್ಗೆ ಇರುವ ಹಲವಾರು ಜನಪದೀಯ ವಿಷಯ ತಿಳಿಯ ಪಡಿಸುತ್ತಾ. 'ನಾಡೆ ಕಾಕುವೋ' (ನಾಡೆ ಕರೆಯುವುದು ) ವಿವರವಾಗಿ ಪಟ್ಟೋಲೆ ಪಳಮೆಯನ್ನು ಉಲ್ಲೇಖಿಸಿ ಕೊಡಗಿನಲ್ಲಿ ನಡೆಯುವ ಹಬ್ಬ ವಿಚಾರವನ್ನು  ಮಾದೇಟಿರ. ಪಿ. ಬೆಳ್ಯಪ್ಪ  ಕಡಗದಾಳು ಇವರು ಸವಿವರವಾಗಿ ತಿಳಿಸಿದ್ದಾರೆ. ಈ ಪುಸ್ತಕವು ವಿವಿಧ ರೀತಿಯ, ವಿವಿಧ ಶೈಲಿಯ, ವಿವಿಧ ಭಾಷೆಯ ಬೈಗುಳ ಬರಹಗಳನ್ನು ಒಳಗೊಂಡಿದೆ. ಅವರ ಬೈಗುಳಗಳ ಬರಹದಲ್ಲಿ , ಹಲವು ಬಾರಿ ಜೀವನದಲ್ಲಿ  ಬೈಗುಳಗಳು ಬಹಳಷ್ಟು ಮಹತ್ವವನ್ನು ಪಡೆದುಕೊಂಡಿರುತ್ತದೆ, ಹೆಚ್ಚಾಗಿ ಹಿರಿಯರು ಬಯ್ಯುತ್ತಾರೆ ಅದು ಒಳ್ಳೆಯದಕ್ಕೇ ಎಂಬುದನ್ನು ತಿಳಿಸಿದ್ದಾರೆ. ಹಾಗೆಯೇ  "ಬೈಯುವವರು ಒಳ್ಳೆಯದಕ್ಕೆ ಬಯ್ಯುತ್ತಾರೆ" ಎನ್ನುತ್ತಾರೆ. ಅದು ನಿಜವಾದ ವಿಷಯ. ಹೊಗಳುವವರು  ಅಟ್ಟಕ್ಕೆ ಏರಿಸಿ ನಮ್ಮನ್ನು ಬೀಳಿಸುವ ಹುನ್ನಾರ ಮಾಡಿರುತ್ತಾರೆ  ಅಥವಾ ಎಲ್ಲಿ ಬೈದರೆ ಅವರಿಗೆ ಬೇಸರವಾಗುತ್ತದೆ ಎಂದು ಹೊಗಳುತ್ತಾರೆ. ಆಗ ವ್ಯಕ್ತಿಯ ಜೀವನದಲ್ಲಿ ಬದಲಿಕೆ ಇಲ್ಲದೆ ಹೊಗಳಿಕೆಯಲ್ಲಿ ಬೆಳೆಯುವುದರಿಂದ ಕಷ್ಟ ಸುಖದ ಅರಿವು ಕೂಡ ಇಲ್ಲದೆ ಮೇಲಿಂದ ಮೇಲೆ ತಪ್ಪು ಮಾಡುತ್ತಿರುತ್ತಾರೆ. ಕೆಲವರು ನಾನು ನೋಡಿದ ಹಾಗೆ,  ಅವರ ಮಾತನಾಡುವ ಶೈಲಿಯೇ ಬೈಗುಳದಲ್ಲಿರುತ್ತದೆ,  ನಗುನಗುತ್ತಲೇ ಬೈಗುಳ ಪದಗಳನ್ನು ಬಳಸುತ್ತಾರೆ. ಅವರ ಪರಿಚಿತರು ಅವುಗಳನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳದೆ ಅದೇ ರೂಢಿಯಲ್ಲೇ ಬೆಳೆದು ಬಿಡುತ್ತಾರೆ. ಹೊಸಬರು ಪರಿಚಯವಾದರೆ ಅಯ್ಯೋ ಈ ವ್ಯಕ್ತಿ ಹೇಗೇಗೋ ಮಾತನಾಡುತ್ತಿದ್ದಾನೆ ಎಂದು ಯೋಚಿಸುತ್ತಾರೆ. ಅವುಗಳ ಅರಿವೆಲ್ಲವೂ ಈ ಪುಸ್ತಕದಲ್ಲಿ ಸಿಗುತ್ತವೆ.
ಮನುಜನ ಮನಸ್ಸು ಒಮ್ಮೆ ಶಾಂತವಾಗಿದ್ದರೆ, ಮತ್ತೊಮ್ಮೆ ಸಿಡುಕುತ್ತವೆ. ತನಗಿಷ್ಟವಿಲ್ಲದ ಕೆಲಸ ಮಾಡಿದಾಗ ಅವರಿಗೆ ಅರಿಯದಂತೆ ಮಾತುಗಳಲ್ಲಿ ಬೈಗುಳಗಳು ಬರುತ್ತವೆ. ಅಂತಹ ವಿಚಾರಗಳನ್ನು ಈ ಪುಸ್ತಕ ಒಳಗೊಂಡಿದೆ. ಬೈಗುಳಗಳು ಕೆಟ್ಟದು ಎಂದು ಯಾಕೆ ಯೋಚಿಸಬೇಕು? ನಮ್ಮ ಅರಿವಿಗೆ ಹೇಗೆ ತೆಗೆದುಕೊಳ್ಳುತ್ತೇವೆ ಹಾಗೆ ಅದು ಕಾಣ ಸಿಗುತ್ತದೆ ಅಷ್ಟೆ. ಕೆಲವೊಮ್ಮೆ ನನ್ನ ಮಗನೇ ಎಂದು ಬಯ್ಯುತ್ತಾರೆ, ನಿನ್ನ ಅಮ್ಮನ್ ಅಂದು ಬೈತಾರೆ, ಹಾಗೆಂದ ಮಾತ್ರಕ್ಕೆ ಅವರು ಅವರ ಮಗುವಾಗಿ ಬಿಡುತ್ತಾರೆ ಏನು!. ಕೆಟ್ಟ ಮಾತುಗಳನ್ನು ಆಡುವಾಗ ಪರಿವೇ ಇಲ್ಲದೆ ಹೇಳುವ ಮಾತುಗಳ ಪರಿಣಾಮ, ಸಂದರ್ಭಗಳ ಕುರಿತು ಕೊಡವ ಬೈಗುಳ ಸಾಹಿತ್ಯದಲ್ಲಿ ಅಂಜಪರವಂಡ ರಂಜು ಅವರು ತಿಳಿಸಿದ್ದಾರೆ. ಅದರಂತೆ ಕೊಡವ ಭಾಷೆಯ ಪರ್ದೇಶಿ ಬೈಗುಳ ಗಮನ ಸೆಳೆಯುವಂತಿದೆ, ನಾವೆಲ್ಲ ಪರದೇಶಿ ಎಂದರೆ ವಿದೇಶಿ ಅಥವ ಹೊರದೇಶದವರಿಗೆ ಹೇಳುವುದು. ಆದರೆ ಕೊಡವ ಭಾಷೆಯಲ್ಲಿ ಗತಿ ಇಲ್ಲ, ಹಿಂದೆ ಮುಂದೆ ಯಾರಿಲ್ಲ ಎಂಬ ಅರ್ಥ ಹೊಂದಿರುವುದು ಭಾಷೆ ಅರ್ಥ,  ಅಂತರ ತಿಳಿಯ ಪಡಿಸುತ್ತಿದೆ. ಹೀಗೆ ಕೊಡವ ಭಾಷೆ ಮತ್ತು ಬ್ಯಾರೀ ಭಾಷೆಯ ಬರವಣಿಗೆಗಳು ಈ ಪುಸ್ತಕದಲ್ಲಿದೆ. ಈ ಭಾಷೆಯ ಪರಿಚಯ ಇಲ್ಲದವರಿಗೂ ಲೇಖನ ಕನ್ನಡ ಲಿಪಿಯಲ್ಲಿ ಇರುವುದರಿಂದ ಒಂದಷ್ಟು ಬೈಗುಳ ಸಾಲು ಗುರುತಿಸಿ ಓದ ಬಹುದಾಗಿದೆ.  ಲೇಖಕರಾದ ವೈಲೇಶ್ ಅವರ ಬೈಗುಳಗಳು ಸುರಿಮಳೆಯನ್ನೇ ಗೈದಿದೆ. ಒಟ್ಟಿನಲ್ಲಿ ಈ ಪುಸ್ತಕದ ಹದಿಮೂರು ಲೇಖನಗಳು ಒಂದೊಂದು ಬೈಗುಳ  ವಿಷಯವನ್ನು ಹೊತ್ತು ತಂದಿದೆ. ಒಂದು ಸಂಸಾರವನ್ನು ಒಡೆಯುವ ಕೆಲಸವನ್ನೂ ಮಾಡುವ ಬೈಗುಳ, ಒಬ್ಬನ ಮಾನಸಿಕ ಒತ್ತಡವನ್ನು ಹೊರಹಾಕುವ ಕೆಲಸವನ್ನೂ ಮಾಡುತ್ತದೆ ಎಂದಿರುವುದು, ಮಾನವ ಸಕಾರಾತ್ಮಕ ಮತ್ತು ನಕಾರಾತ್ಮಕ ಬುದ್ಧಿಯಲ್ಲಿ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾನೆ, ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾದ ನಿಟ್ಟಿನಲ್ಲಿ ಬೆಳಕಿಗೆ ಬಂದಂತಿದೆ ಈ ಪುಸ್ತಕ.
" ಬದುಕು ಎಂದ ಮೇಲೆ ಹಲವು ದಾರಿ ಉಂಟು
 ಹೆದರದೆಲೆ ಸಾಗಿದರೆ ಜೀವನವು ನಮಗೆ ನಂಟು
 ಒಮ್ಮೊಮ್ಮೆ ಬೈಗುಳ ಒಮ್ಮೊಮ್ಮೆ ಪ್ರೀತಿಯ ನುಡಿ
 ಅರಿತು ನಡೆಯುತಿರೆ ಜೀವನವ ಸಂತಸವ ಮಾಡಿ
 ಯಾರು ಏನು ಶಾಶ್ವತವಿಲ್ಲ ಇಲ್ಲಿ ತಿಳಿಯುತಿರಿ
 ಒಳ್ಳೆಯ ಕಾರ್ಯಗಳನ್ನು ಮಾಡುತ್ತ ಸಾಗುತಿರಿ"
 ಎಂದು ಹೇಳುತ್ತಾ ಬೈಗುಳ ಬರಹ ಪುಸ್ತಕದಲ್ಲಿ ಹಲವಾರು ಅಂಶಗಳಿವೆ. ಬೈಗುಳ ಎಂದರೆ ಅದು ಕೆಟ್ಟದ್ದಲ್ಲ ಅದರಲ್ಲಿ ಒಳ್ಳೆಯ ಅಂಶಗಳು ಇರುತ್ತವೆ. ಅರಿತು ನಡೆದರೆ ಜೀವನ  ಮರೆತು ಕೊನೆಯಾದರೆ   ಸ್ಮಶಾನ. ನಾವು ಅರಿತು ನಡೆಯಬೇಕೆ ಹೊರತು. ಮರೆತು ಕೊನೆಯಾಗಬಾರದು. ಎಂದು ಹೇಳುತ್ತಾ  ಬೈಗುಳ ಬರಹ ಸಾಹಿತ್ಯ ಲೋಕದಲ್ಲಿ  ಒಂದು ಹೊಸ ರೀತಿಯ ವಿಭಿನ್ನ ವಿಮರ್ಶೆಗೆ ಕಾರಣವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.  ಬೈಗುಳ ಬರಹಗಳು  ಪುಸ್ತಕ ಓದಿ  ನನಗೆ ತಿಳಿದಷ್ಟು  ವಿಚಾರವನ್ನು  ಓದುಗರಿಗೆ ತಿಳಿಸುವ ಪ್ರಯತ್ನ  ಮಾಡಿದ್ದೇನೆ.ಹೀಗೆ ಶ್ರೀ ಅಲ್ಲಾ ರಂಡ ವಿಠಲ ನಂಜಪ್ಪ ರವರು ಸಾಹಿತ್ಯ ಲೋಕದಲ್ಲಿ ಹೊಸತನದ ಇನ್ನೂ ಹಲವು ವಿಭಿನ್ನ ವಿಚಾರದ ಪುಸ್ತಕಗಳು ಹೊರಬರಲೆಂದು ಆಶಿಸುತ್ತಾ   ಈ ಪುಸ್ತಕದ ಪರಿಚಯಕ್ಕೆ ವಿರಾಮ ಹಾಕುತ್ತಿದ್ದೇನೆ. ಜೈ ಹಿಂದ್ ಜೈ ಭಾರತ್ ಮಾತೆ.

 ಶ್ರೀಮತಿ ಹೆಚ್, ಎಸ್.  ಪ್ರತಿಮಾ  ಹಾಸನ್.  ಸಾಮಾಜಿಕ ಚಿಂತಕಿ.ಶಿಕ್ಷಕಿ.ಹಾಸನ.